ಬಿಸ್ಮಿಲ್ಲಾಖಾನ್
1916-ಶ್ರೇಷ್ಠ ಶಹನಾಯಿ ವಾದಕ. ಹುಟ್ಟಿದ್ದು ಬಿಹಾರ ರಾಜ್ಯದ ಡುಮರಾವ್ ಎಂಬ ಚಿಕ್ಕ ಸಂಸ್ಥಾನಿಕ ಗ್ರಾಮದಲ್ಲಿ. ತಂದೆ ಉಸ್ತಾದ ಪೈಗಂಬರ್ ಬಕ್. ಡುಮರಾವ್ ಸಂಸ್ಥಾನದ ಆಸ್ಥಾನ ಶಹನಾಹಿ ವಾದಕರಾಗಿದ್ದರು. ತಾತ ಮುತ್ತಾತರು ಶಹನಾಯಿ ವಾದನಕಲೆಯಲ್ಲಿ ನಿಷ್ಣಾತರು. 

	ಬಿಸ್ಮಿಲ್ಲಾಖಾನರಿಗೆ ಶಹನಾಯಿ ವಾದನ ಕಲೆ ರಕ್ತಗತವಾಗಿಯೇ ಹರಿದುಬಂದಿದೆ. ಆಗರ್ಭ ಶ್ರೀಮಂತಿಕೆಯಲ್ಲಿ ಜನಿಸಿದವನಿಗೆ ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದಾ ಎನ್ನುವ ವಾಕ್ಸರಣಿಯ ಜಾಡಿನಲ್ಲೇ ಬಿಸ್ಮಿಲ್ಲಾ ಉರ್ವಿಯೊಳು ಊದುತ್ತಲೇ ಉದಯಿಸಿದ ಎಂದು ಹೇಳಿದರೆ ಅತಿಶಯೋಕ್ತಿಯಾಗದು. 

	“ನಾನು ಸುಮಾರು ಮೂರುವರೆ ವರುಷದವನಿದ್ದಾಗಲೇ ನನ್ನ ಕಕ್ಕ ಉಸ್ತಾದ ಅಲೆಬಕ್ಷ್ ಜೊತೆಗೆ ಶಹನಾಯಿ ಸಂಗೀತ ಕಚೇರಿಗಳಿಗೆ ಹೋಗುತ್ತಿದ್ದೆ. ಒಂದು ಸಲ ಕಾಶೀ ವಿಶ್ವನಾಥ ಮಂದಿರದಲ್ಲಿ ಜರಗಿದ ಶಹನಾಯಿ ಕಚೇರಿಯಲ್ಲಿ ನನ್ನ ಕಕ್ಕನ ಜೊತೆಗೆ ಹೋದಾಗ ಅವರ ವಾದನದ ಅನಂತರ ಕಾರ್ಯನಿರ್ವಾಹಕರು ನನಗೂ ಶಹನಾಯಿ ನುಡಿಸಲು ಕೇಳಿದಾಗ ನಾನು ಒಳ್ಳೆಯ ಧೈರ್ಯ ವಿಶ್ವಾಸಗಳಿಂದ ನುಡಿಸಿದೆ. ಮಿಡಿ ಶಹನಾಯಿ ಯಿಂದ ಬಂದ ಆ ನನ್ನ ಸಂಗೀತಕ್ಕೆ ಶ್ರೋತೃಗಳು ಮೆಚ್ಚಿಕೊಂಡರಲ್ಲದೆ ದೇವಸ್ಥಾನದ ಅಧಿಕಾರಿಗಳು ಬಹುಮಾನವಾಗಿ ಪದಕವೊಂದನ್ನು ಕೊಟ್ಟು ನನ್ನನ್ನು ಹೃತ್ಪೂರ್ವಕ ಆಶೀರ್ವದಿಸಿದರು. ಅಂದಿನಿಂದ ನನ್ನ ಕಕ್ಕಂದಿರೇ ನನ್ನ ಪೂಜ್ಯಗುರುಗಳಾಗಿ ನನ್ನನ್ನು ಈ ವಾದನ ಕಲೆಯಲ್ಲಿ ಪಳಗಿಸಿದರು” ಎಂದು ಖಾನರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

	“ಓರ್ವ ಸಂಸ್ಥಾನಿಕರ ದರಬಾರಿನಲ್ಲಿ ನನ್ನ ಕಕ್ಕಂದಿರ ಶಹನಾಯಿ ವಾದನ ನಡೆದಾಗ ಆ ರಾಜರೇ ನನಗೆ ಆಗಿನ ಜನಪ್ರಿಯ ಭಜನೆಯನ್ನು ಜ್ಯೋಧ್ಯಾವೈ ಸೋಪಾವೈ ಕಷ್ಟಮಿಟೇ ತನ್‍ಕಾ ನುಡಿಸಲು ಹೇಳಿದಾಗ ನಾನು ಇಡೀ ಭಜನೆಯನ್ನು ಚಾಚೂ ತಪ್ಪದೆ ನುಡಿಸಿದ್ದನ್ನು ಕೇಳಿ ಅತ್ಯಂತ ಹರ್ಷದಿಂದ ನನ್ನನ್ನು ತಬ್ಬಿಕೊಂಡು ಹರ್ಷೋದ್ಗಾರದ ಮಳೆಗರೆದು ಸುವರ್ಣ ಪದಕವೊಂದನ್ನು ಕೊಟ್ಟು ಸನ್ಮಾನಿಸಿದರು. ಅಂದಿನಿಂದ ಇಂದಿನತನಕ ದೇವರ ಅನುಗ್ರಹದಿಂದ ಮತ್ತು ಹಿರಿಯರ ಆಶೀರ್ವಾದಗಳಿಂದ ನನ್ನ ಸಂಗೀತ ಸೇವೆಯನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದೇನೆ”. ಎಂದು ಇನ್ನೊಂದು ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. 

	ಮದುವೆ ಮಂಟಪಕ್ಕೆ ಮತ್ತು ದೇವಾಲಯದ ಪರಿಸರಕ್ಕೆ ಸೀಮಿತವಾದ ಶಹನಾಯಿ ವಾದ್ಯವನ್ನು ಸಂಗೀತ ಸಮ್ಮೇಳನಗಳ ವೇದಿಕೆಯ ಮೇಲೆ ತಂದ ಶ್ರೇಯಸ್ಸು ಉಸ್ತಾದ ಬಿಸ್ಮಿಲ್ಲಾಖಾನರಿಗೆ ಸಲ್ಲಬೇಕು. ಇವರ ಶಹನಾಯಿ ವಾದನವಾದ್ಯ ಸಂಗೀತದ ಎಲ್ಲೆ ಮೀರಿ ಹಾಡುಗಾರಿಕೆಯಂತೆ ಸೂಕ್ಷ್ಮತರ ಸ್ವರಮಾಧುರ್ಯವುಳ್ಳ ಹೃದಯಸ್ಪರ್ಶಿ ಸಂಗೀತವಾಗಿದೆ. 

	ಇವರು ಮುಖ್ಯತಃ ಶಹನಾಯಿಯನ್ನೇ ಸಂಗೀತದ ಮಾಧ್ಯಮವಾಗಿ ಬಳಸಿಕೊಂಡು ಅದರಲ್ಲಿ ಶಾಸ್ತ್ರೀಯ ಸಂಗೀತದ ಸಂಪೂರ್ಣ ಸೌಂದರ್ಯ ಸ್ವರೂಪ ನಿರ್ಮಿಸಿ ಕಲಾಸೃಷ್ಟಿಗೆ ಅಮೂಲ್ಯ ಕೊಡುಗೆಯನ್ನಿತ್ತಿದ್ದಾರೆ. 

	ಉಸ್ತಾದರ ಶಹನಾಯಿಯ ಕೀರ್ತಿ ಭಾರತಕ್ಕಷ್ಟೇ ಸೀಮಿತವಾಗದೆ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕಾ, ಜರ್ಮನಿ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳಿಗೂ ಪಸರಿಸಿದೆ. 1965ರಲ್ಲಿ ಲಂಡನ್ನಿನಲ್ಲಿ ಜರುಗಿದ ಎಡಿನ್‍ಬರಾ ಫೆಸ್ಟಿವಲ್ ಅಂಡ್ ಕಾಮನ್ ವೆಲ್ತ್ ಆಟ್ರ್ಸ್ ಫೆಸ್ಟಿವಲ್‍ನಲ್ಲಿ ಭಾಗವಹಿಸಿದ್ದರಲ್ಲದೆ ಇಂಟರ್ ನ್ಯಾಶನಲ್ ಮೂಜಿಕ್ ಕೌನ್ಸಿಲ್ಲಿನ ಆಮಂತ್ರಣದ ಮೇರೆಗೆ ಯೂರೊಪು ಖಂಡವನ್ನೆಲ್ಲ ಸುತ್ತಿ ಬಂದಿದ್ದಾರೆ. 

	ಉಸ್ತಾದರ ಈ ಅಮೋಘ ಸಂಗೀತ ಪಾಂಡಿತ್ಯಕ್ಕೆ ಮೆಚ್ಚಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ (1961), ಪದ್ಮಭೂಷಣ (1968), ಪದ್ಮವಿಭೂಷಣ (1980) ಬಿರುದುಗಳನ್ನು ನೀಡಿ ಗೌರವಿಸಿದೆ.
	ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಉಸ್ತಾದರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ದಿಲ್ಲಿಯ ಸಂಗೀತ ನಾಟಕ ಅಕಾಡೆಮಿ ಹಿಂದೂಸ್ಥಾನೀ ವಾದ್ಯಸಂಗೀತಕ್ಕೆ ಬಿಸ್ಮಿಲ್ಲಾರನ್ನು ಪುರಸ್ಕರಿಸಿದ್ದಲ್ಲದೆ ಬಂಗಾಲದ ಶಾಂತಿನಿಕೇತನ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿ ಕೊಟ್ಟು (1979) ಗೌರವಿಸಿದೆ. ಅಮೆರಿಕೆಯ ಸಂಯುಕ್ತ ಸಂಸ್ಥಾನದ ಫಿಲ್ ಹಾರ್ಮಾನಿಕ್ ಹಾಲ್ ಲಿಂಕನ್ ಸೆಂಟರ್ ನ್ಯೂಯಾರ್ಕ್‍ನಲ್ಲಿ ಮತ್ತು ಅದೇ ವರುಷ (1967) ಜೂನ್ ತಿಂಗಳ ಮಾಂಟ್ರೀಲ್ ದಲ್ಲಿ ನಡೆದ ಎಕ್ಸ್-ಪೋ-67ರಲ್ಲಿ ಉಸ್ತಾದ ಬಿಸ್ಮಿಲ್ಲಾರವರು ಭಾರತವನ್ನು ಪ್ರತಿನಿಧಿಸಿ ಹಿಂದುಸ್ಥಾನೀ ಸಂಗೀತದ ಜಯಭೇರಿ ಊದಿದರು. ಈಗ (1984) ಬಿಸ್ಮಿಲ್ಲಾಖಾನರು ವಾರಾಣಿಯಲ್ಲಿ ವಾಸವಾಗಿದ್ದಾರೆ. 						
(ಎಸ್.ಬಿ.ಎಚ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ